ಪ್ರೊಡಕ್ಟಸ್ ಸುಣ್ಣಶಿಲೆ
 	ಸಾಲ್ಟ್‍ರೇಂಜ್ ಪ್ರದೇಶದಲ್ಲಿ, ಆಲಿವ್ ಶಿಲಾವರ್ಗ ಮತ್ತು ಚುಕ್ಕೆ ಮರಳು ಶಿಲಾವರ್ಗಗಳ ಮೇಲೆ ಅನುರೂಪತೆಯಿಂದ ನಿಕ್ಷೇಪಗೊಂಡ ಶಿಲೆ. ಇದು 150-260 ಮೀಟರುಗಳಷ್ಟು ಮಂದವಾಗಿದೆ. ಸಾಲ್ಟ್‍ರೇಂಜಿನ ಪಶ್ಚಿಮ ಮತ್ತು ಮಧ್ಯಭಾಗಗಳಲ್ಲಿ ಉತ್ತಮವಾಗಿ ರೂಪುಗೊಂಡು ಪೂರ್ವಕ್ಕೆ ಬಂದ ಹಾಗೆಲ್ಲ ತೆಳುವಾಗುತ್ತದೆ. ಪ್ರೊಡಕ್ಟಸ್ ಸುಣ್ಣಶಿಲೆ ಭಾರತದ ಭೂಇತಿಹಾಸದ ಮುಖ್ಯ ನಿಕ್ಷೇಪಗಳ ಪೈಕಿ ಒಂದು. ಜೀವ್ಯವಶೇಷಭರಿತ ಶಿಲಾ ಸ್ತೋಮಗಳಲ್ಲಿ ಭಾರತದ ಭೂವಿಜ್ಞಾನಿಗಳಿಗೆ ಮೊದಲು ಗೋಚರವಾದುದು ಇದೇ ಆದ್ದರಿಂದ, ಇದನ್ನು ವಿವರ ಅಧ್ಯಯನ ವಿಷಯವಾಗಿ ಮಾಡಿದ್ದಾರೆ. ಇದು ಪ್ರಪಂಚದಲ್ಲಿ ಪರ್ಮಿಯನ್ ಯುಗದ ಸಾಗರನಿಕ್ಷೇಪಗಳಲ್ಲೆಲ್ಲ ಅತ್ಯಂತ ಉತ್ತಮ ರೀತಿಯಾಗಿ ರೂಪುಗೊಂಡು ಹೆಸರುವಾಸಿಯಾಗಿದೆ. ಈ ಶಿಲಾಸ್ತೋಮ ಮುಖ್ಯವಾಗಿ ಸುಣ್ಣಶಿಲೆಯಿಂದ ಕೂಡಿದ್ದು ಹೇರಳ ಜೀವ್ಯವಶೇಷಗಳನ್ನು ಒಳಗೊಂಡಿರುತ್ತದೆ. ಪ್ರೊಡಕ್ಟಸ್ ಎಂಬ ಬ್ರೇಕಿಯೊಪಾಡ್ ಹೇರಳವಾಗಿರುವುದೇ ಅಲ್ಲದೆ, ಅದು ಈ ಶಿಲೆಯ ಎಲ್ಲ ಭಾಗಗಳಲ್ಲಿಯೂ ದೊರೆಯುವುದರಿಂದ ಇದಕ್ಕೆ ಪ್ರೊಡಕ್ಟಸ್ ಸುಣ್ಣಶಿಲೆ ಎಂದು ಹೆಸರಾಗಿದೆ. ಈ ಶಿಲಾಸ್ತೋಮವನ್ನು ಮೂರು ಭಾಗಗಳಾಗಿ ವಿಭಜಿಸಲಾಗಿದೆ. ಕೆಳಭಾಗವನ್ನು ಮತ್ತೆ ಅಂಬ್ ಮತ್ತು ಕಟ್ಟ ಎಂಬ ಎರಡು ಭಾಗಗಳಾಗಿಯೂ ಮಧ್ಯಭಾಗವನ್ನು  ವಿರ್ಗಿಲ್ ಮತ್ತು ಕಲಬಾಗ್ ಎಂಬ ಎರಡು ಭಾಗಗಳಾಗಿಯೂ ಮೇಲ್ಭಾಗವನ್ನು ಕುಂದಘಾಟ್, ಜಬ್ಬಿ ಮತ್ತು ಚಿದ್ರು ಎಂಬ ಮೂರು ಭಾಗಗಳಾಗಿಯೂ ವಿಭಜಿಸಲಾಗಿದೆ.

	ಪ್ರೊಡಕ್ಟಸ್ ಸುಣ್ಣಶಿಲಾಸ್ತೋಮದ ಅತ್ಯಂತ ಮೇಲಿನ ಶಿಲಾಪಾದ ಚಿದ್ರು. ಇದರಲ್ಲಿರುವ ಜೀವ್ಯವಶೇಷಗಳು, ಇದರ ಕೆಳಗಿರುವ ಶಿಲೆಗಳಲ್ಲಿರುವ ಜೀವ್ಯವಶೇಷಗಳಿಗಿಂತ ತೀರಭಿನ್ನವಾಗಿವೆ. ಬ್ರೇಕಿಯೋಪಾಡ್ ಗುಂಪಿನ ಪ್ರಾಣಿಗಳ ಅವಶೇಷಗಳು ಕಡಿಮೆಯಾಗಿ, ಲೆಮಲಿಬ್ರಾಂಕ್ ಮತ್ತು ಶಂಖ ಜಾತಿಯ ಪ್ರಾಣಿಗಳ ಅವಶೇಷಗಳು ಹೆಚ್ಚಾಗಿವೆ. ಆದ್ದರಿಂದ ಚಿದ್ರು ಪದರಗಳನ್ನು ಪರ್ಮಿಯನ್ ಮತ್ತು ಟ್ರಯಾಸಿಕ್ ಯುಗಗಳ ಮಧ್ಯೆ ಇರುವ ಪರ್ವಕಾಲದ ನಿಕ್ಷೇಪಗಳೆಂದು ಪರಿಗಣಿಸಲಾಗಿದೆ. ಪದರಗಳು ಪರ್ಮಿಯನ್ ಯುಗದ ಅಂತ್ಯವನ್ನು ಸಾರಿ ಟ್ರಯಾಸಿಕ್ ಯುಗದ ಆರಂಭವನ್ನು ಸೂಚಿಸುತ್ತವೆ. ಅಲ್ಲದೆ ಈ ಪದರಗಳ ಮೇಲೆ ಟ್ರಯಾಸಿಕ್‍ಯುಗದ ಆದಿಕಾಲದ ಸೆರಟೈಟಿಸ್ ಪದರಗಳು ಅನುರೂಪ್ಯತೆಯಿಂದ ನಿಕ್ಷೇಪಗೊಂಡಿವೆ. ಯೂರೊಪಿನಲ್ಲಿ ಪ್ರತಿನಿಧಿಸಲ್ಪಡದಿರುವ ಪರ್ವಕಾಲ ಇಲ್ಲಿ ಪ್ರತಿನಿಧಿಸಲ್ಪಟ್ಟಿದೆ. ಆದ್ದರಿಂದ ಪರ್ಮೊ-ಟ್ರಯಾಸಿಕ್ ಅನನುರೂಪ್ಯತೆ ಪ್ರಪಂಚವ್ಯಾಪ್ತಿ ಹೊಂದಿಲ್ಲ ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ.

	ಪ್ರೊಡಕ್ಟಸ್ ಸುಣ್ಣಶಿಲಾಸ್ತೋಮಗಳಲ್ಲಿ ಸರೀಸೃಪ ಮತ್ತು ಇತರ ಉಚ್ಚ ಜಾತಿಯ ಪ್ರಾಣಿಗಳನ್ನು ಬಿಟ್ಟು ಉಳಿದ ಎಲ್ಲ ಗುಂಪಿನ ಪ್ರಾಣಿಗಳ ಅವಶೇಷಗಳೂ ಇವೆ. ಗತವಂಶದ ಹಾದಿಯಲ್ಲಿ ಬಹುದೂರ ಸಾಗಿದ ಟ್ರೈಲೊಬೈಟುಗಳು ಕೂಡ ಪಿಲಿಪ್ಸಿಯ ಮತ್ತು ಬೈರೊಪೈಗೆ ಎಂಬ ಎರಡು ವಿಧಗಳಿಂದ ಪ್ರತಿನಿಧಿಸಲ್ಪಟ್ಟಿವೆ. ಅತಿ ಹೇರಳವಾಗಿ ಮತ್ತು ಉಚ್ಪ್ರಾಯಸ್ಥಿತಿಯಲ್ಲಿದ್ದ ಪ್ರಾಣಿಗಳೆಂದರೆ ಅಚಲಿತ ಪ್ರಾಣಿಗಳಾದ ಬ್ರೇಕಿಯೊಪೋಡ, ಕ್ರೈನಾಯಿಡ್ಸ್ ಮತ್ತು ಬ್ರಿಯೊಜೋವಗಳು. ಇವುಗಳಿಂದ ಕೂಡಿದ ಸಾಗರದ ತಳ ಅಂತರಾಳದ ಕಾಡಿನಂತೆ ಇದ್ದಿರಬೇಕು. ಶಂಖಗಳು ಮತ್ತು ಕಪ್ಪೆಚಿಪ್ಪಿನ ಜಾತಿಯ ಪ್ರಾಣಿಗಳು ಅಷ್ಟು ಹೆಚ್ಚಾಗಿರಲಿಲ್ಲ. ಕೆಫೆಲೋಪೋಡ ವರ್ಗದ ಗೋನಿಯಟೈಟಿಸ್, ಸೆರಟೈಟಿಸ್ ಮತ್ತು ಅಮೊನೈಟಿಸ್ ಗುಂಪುಗಳೂ ಕಂಡುಬಂದಿವೆ.
							(ಡಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ